peddugunda ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
peddugunda ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜನವರಿ 9, 2009

ಪೆದ್ದುಗುಂಡನ ರಗಳೆ - ೧೮

ಪಗಡೆ ರಂಗದಿ ಎಲ್ಲವನು ಸೋತ
ರಣ ರಂಗದಿ ಗೆದ್ದ, ಎಲ್ಲವನು.
ಅಲ್ಲಿ ಮಾನ, ಇಲ್ಲಿ ಜೀವವೇ ಪಣ !
ಎರಡೂ ಜೂಜಿನಾಟ- ಪೆದ್ದುಗುಂಡ

ಪೆದ್ದುಗುಂಡನ ರಗಳೆ - ೧೭

ಸಂಸಾರ ಹಾಸಂಗಿ, ನೀ ಒಂದು ಕಾಯಿ
ವಿಧಿ ಬಿಟ್ಟ ದಾಳದಂತೆ ನಿನ್ನ ನಡೆ
ಹಾವ್ದೋರೆ ಹಿನ್ನಡೆ; ಏರು, ಏಣಿ ಬರಲು
ಜೀವನ ಪರಮಪದದಾಟ - ಪೆದ್ದುಗುಂಡ
-----------------------------------
ಹಾಸಂಗಿ = ಆಟದ ಹಾಸು
ಹಾವ್ದೋರೆ = ಹಾವು + ತೋರೆ = ಹಾವು ಎದುರಾದರೆ
ಪರಮಪದದಾಟ = ಪರಮಪದದ + ಆಟ = ಹಾವು ಏಣಿ ಆಟ

ಬುಧವಾರ, ಜನವರಿ 7, 2009

ಪೆದ್ದುಗುಂಡನ ರಗಳೆ - ೧೬

ಶಬ್ದದ ಹಂದರಕೆ ಭಾವನೆಯೆ ಹೊದಿಕೆ
ಆಲಿಪನ ಕಿವಿಯಲ್ಲಿ ಮತ್ತದು ನಗ್ನ!
ಅದಕಲ್ಲಿ ಹೊಸ ಭಾವ ತೊಡಿಸೆ
ಕೇಳುಗನ ಕಿವಿಯಂತೆ ಅರ್ಥ - ಪೆದ್ದುಗುಂಡ

ಮಂಗಳವಾರ, ಜನವರಿ 6, 2009

ಪೆದ್ದುಗುಂಡನ ರಗಳೆ - ೧೫

ಹೃದಯ ತಂತಿ ಮೀಟುವ ಗಂಧರ್ವ ಗೀತ
ಕಣಕಣದಿ ಆನಂದ ತುಡಿತ
ಮನದಾಳದ ನೂರು ಭಾವನೆಗಳ ಚಿಲುಮೆ
ಸಂಗೀತ ನಿಜ ಸ್ವರ್ಗ - ಪೆದ್ದುಗುಂಡ

ಮಂಗಳವಾರ, ಡಿಸೆಂಬರ್ 30, 2008

ಪೆದ್ದುಗುಂಡನ ರಗಳೆ - ೧೪

ದಿನದ ಆಟೋಟದಿ ಮನ ಜಡವಾಯ್ತು
ಜೀವನಾನಂದ ಬುಗ್ಗೆ ಒಣಗಿ ಬರಿದಾಯ್ತು
ಹಳೆ ನೆನಪ ಹೊಸ ಮೆಲುಕು ಕಣ್ಣೀರ ತರಿಸೆ
ಬರಡು ಮನ ಹಸಿರಾಯ್ತು ! - ಪೆದ್ದುಗುಂಡ

ಬುಧವಾರ, ಡಿಸೆಂಬರ್ 24, 2008

ಪೆದ್ದುಗುಂಡನ ರಗಳೆ - ೧೩

ಜ್ಞಾನ ಬೀಜಕೆ ಇಚ್ಛೆಯ ನೀರೆರೆಯೆ
ಚಿತ್ತ ಭಿತ್ತಿಯಲಿ ಅರಿವು ಕುಡಿಯೊಡೆವುದು.
ಬೆಳೆದಂತೆ ಪಸರಿಸಿ ಬಿಳಲುಗಳ ಬಿಟ್ಟ
ಜ್ಞಾನ ವಿಶ್ವವಟ - ಪೆದ್ದುಗುಂಡ
-------------------------------
ಬಿಳಲು = ಬಿಳಲು ಬೇರು
ವಿಶ್ವವಟ = ವಿಶ್ವದಗಲ ಹಬ್ಬಿರುವ ವಟವೃಕ್ಷ

ಭಾನುವಾರ, ಡಿಸೆಂಬರ್ 14, 2008

ಪೆದ್ದುಗುಂಡನ ರಗಳೆ - ೧೨

ಮೂಲಿಕೆ ಸಿಗದೆ ಪವನಸುತಗೆ ಪೇಚು
ಸಂಜೀವಿನಿ ಪರ್ವತವೆ ಸಮಸ್ಯೆಯಾಗೆ
ವಿರಾಟನಾಗಿ ಬೆಳೆದ, ಬೆಟ್ಟವನೆ ಕಿತ್ತೊಯ್ದ
ಸಮಸ್ಯೆಗಿಂತೆತ್ತರನಾಗು - ಪೆದ್ದುಗುಂಡ
--------------------------------------
ಪವನಸುತ = ವಾಯು ಪುತ್ರ (ಹನುಮಂತ)

ಪೆದ್ದುಗುಂಡನ ರಗಳೆ - ೧೧

ಸಮುದ್ರವೆದುರಾಗೆ ಹನುಮ ನಿಂತನೆ?
ಬೆಟ್ಟ ಹೊರುವಾಗೆ ಅವ ಹಿಂಜರಿದನೆ?
ಎಲ್ಲ ಹಾದಿಗಳಲುಂಟು ಕೋಟಲೆಗಳು;
ಅಡೆತಡೆಗೆ ಮಣಿಯದಿರು - ಪೆದ್ದುಗುಂಡ
----------------------------------
ಸಮುದ್ರವೆದುರಾಗೆ = ಸಮುದ್ರವು ಎದುರಾದಾಗ
ಅವ = ಅವನು

ಶನಿವಾರ, ಡಿಸೆಂಬರ್ 13, 2008

ಪೆದ್ದುಗುಂಡನ ರಗಳೆ - ೧೦

ಕಾಸಗಲ ಅಕ್ಷಿ ಪಟದಿ ಕೋಟಿ ದೃಶ್ಯಗಳು
ಹಿಡಿಯ ಹೃದಯದಿ ಭಾವನೆಗಳ ಕಡಲು
ಭೌತ ಪರಿಧಿಯೊಳ್ ಭಾವಾನುಭವ ಅನಂತ
ಮಿತದೊಳಪರಿಮಿತ - ಪೆದ್ದುಗುಂಡ
-----------------------------
ಕಾಸಗಲ = ಕಾಸು ನಾಣ್ಯದಷ್ಟು ಅಗಲ
ಅಕ್ಷಿ ಪಟದಿ = ಕಣ್ಣಿನ ಪಟಲದಲ್ಲಿ (ರೆಟಿನಾ)
ಹಿಡಿಯ = ಹಿಡಿಯಷ್ಟು (ಮುಷ್ಟಿಯಷ್ಟು)

ಗುರುವಾರ, ಡಿಸೆಂಬರ್ 4, 2008

ಪೆದ್ದುಗುಂಡನ ರಗಳೆ - ೯

ನೆನಪ ಸಂದೂಕಿಗೆ ಬಹುಗಂಧ ಚಾವಿ
ಎಲ್ಲಿಂದಲೋ ತೇಲಿ ಬಂದ ವಾಸನೆಯ ಅಮಲು
ವರ್ಷಾಂತರದ ಮರೆವಿನಲೂ ನೋವಿನ ಕದತೆರೆಯೆ
ಮತ್ತೆ ಕಾಡಿತು ನೆನಪು - ಪೆದ್ದುಗುಂಡ
-------------------------------------------------
ಸಂದೂಕು = ಪೆಟ್ಟಿಗೆ
ಬಹುಗಂಧ = ವಿವಿಧ ವಾಸನೆಗಳು
ಚಾವಿ = ಬೀಗದ ಕೈ

ಪೆದ್ದುಗುಂಡನ ರಗಳೆ - ೮

ಸಂಕಲ್ಪದಿಂ ಜೀವದ ಚಲನ ವಿಕಸಂಗಳು
ಶಯನ, ಪೋಷಣ, ಮಿಥುನ, ಭ್ರಮಣಂಗಳು
ಇಚ್ಛೆ ಪೂರ್ತಿಯಿಂ ತೃಪ್ತಿ, ಅದುವೇ ಮರಣ
ಜೀವಸೆಲೆ ಅತೃಪ್ತ - ಪೆದ್ದುಗುಂಡ

ಬುಧವಾರ, ಡಿಸೆಂಬರ್ 3, 2008

ಪೆದ್ದುಗುಂಡನ ರಗಳೆ - ೭

ಅಸ್ಪಂದಿತ ಸ್ನೇಹಾನುರಾಗಗಳು
ಹೃದಿಂದುವಿನ ಕೇತು ರಾಹುಗಳು.
ಎದೆಯಿಂ ವಿಷ ಬೀಜ ಕಿತ್ತೊಗೆಯದಿರೆ,
ಮನಬನವು ಬರಡು - ಪೆದ್ದುಗುಂಡ

------------------------------------

ಅಸ್ಪಂದಿತ = ಪ್ರತಿಕ್ರಿಯೆ ದೊರಕದ
ಹೃದಿಂದು = ಹೃತ್ + ಇಂದು = ಎದೆಯ ಚಂದಿರ

ಶುಕ್ರವಾರ, ನವೆಂಬರ್ 28, 2008

ಪೆದ್ದುಗುಂಡನ ರಗಳೆ - ೬

ಪಾದಸ್ಪರ್ಶದಿ ಶಿಲೆ ಸಾಧ್ವಿಯಾದಲ್
ನಾಮಬಲದಿ ಶಿಲೆ ಜಲದಿ ತೇಲಲ್
ಅರ್ಧಾಂಗಿಯಿಂ ಅಗ್ನಿ ಪ್ರಮಾಣ ಬಯಸೆ
ಮನಸೇಕೆ ಕಲ್ಲಾಯ್ತು? - ಪೆದ್ದುಗುಂಡ

ಭಾನುವಾರ, ನವೆಂಬರ್ 9, 2008

ಪೆದ್ದುಗುಂಡನ ರಗಳೆ - ೫

ಜಗದ ಸತ್ಯ, ಜ್ಞಾನ, ಕಾಡ ಮೂಲೆಯ ಪೂ
ಋಷಿಪುಂಗವರು ಅದ ಹೀರುವ ದುಂಬಿ.
ಸಾಸಿರ ಪೂರಸದೀಪಾಕ ಸನಾತನ;
ಈ ಧಮ್ಮ ಸವಿದುಪ್ಪ - ಪೆದ್ದುಗುಂಡ.


---------------------------------

ಸಾಸಿರ = ಸಾವಿರ = ಲೆಕ್ಖವಿಲ್ಲದಷ್ಟು

ಪೂರಸದೀಪಾಕ = ಪೂ + ರಸದ + ಈ + ಪಾಕ

ಧಮ್ಮ = ಧರ್ಮ (ಸನಾತನ ಧರ್ಮ )

ಸವಿದುಪ್ಪ = ಸಿಹಿ ತುಪ್ಪ = ಜೇನು ತುಪ್ಪ

ಶುಕ್ರವಾರ, ನವೆಂಬರ್ 7, 2008

ಪೆದ್ದುಗುಂಡನ ರಗಳೆ - ೪

ಹೂಂಕರಿಸಿ ಘೀಳಿಟ್ಟು ತಮಸ ಹೊರಗಟ್ಟು
ಹಣತೆ ಹೊನ್ನ ಬೆಳಗಿಸಿ ಸತ್ತ್ವ ಬರಮಾಡು
ದೀಪದ ಬೆಳಕಲ್ಲಿ ಮಿಂದ ಮನೆಯೊಳಗೆ
ಸಿರಿದೇವಿ ಬರುವಳು - ಪೆದ್ದುಗುಂಡ

ಪೆದ್ದುಗುಂಡನ ರಗಳೆ - ೩

ನಭದ ಆಳೆತ್ತರ ಉದ್ದಗಲಗಳುಂಟೆ
ಅರಿವಿನ ಹರವು ಅದಕೆ ದುಪ್ಪಟ್ಟು
ಕಲಿಕೆ ಪಥ ಅಂತ್ಯವಿಲ್ಲದ ಪಯಣ
ಜ್ಞಾನದಾಹ ಚಿರಕಾಲ - ಪೆದ್ದುಗುಂಡ

ಗುರುವಾರ, ನವೆಂಬರ್ 6, 2008

ಪೆದ್ದುಗುಂಡನ ರಗಳೆ - ೨

ಒಂದೊಮ್ಮೆ ಎಲ್ಲೆಡೆ ಬೆಳಕ ಕುಡಿಮಿಂಚು
ತಾಮಸದ ಕರಿ ನೆರಳ ಸರಿಯಿತು ಸಂಚು
ಕತ್ತಲೆಯ ಸುಖಭೂತ ನರಳಿ ಬಸವಳಿಯೆ
ದೀಪ ಜ್ಯೋತಿ ಅರಳಿತು - ಪೆದ್ದುಗುಂಡ

ಸೋಮವಾರ, ಜನವರಿ 28, 2008

ಪೆದ್ದುಗುಂಡನ ರಗಳೆ - ೧

ಡಿ.ವಿ.ಜಿ. ಅವರ ಎತ್ತರವನ್ನು ಅಳೆಯಲು ಅಸಾಧ್ಯ ಆದರೆ ಅವರ ಮೇರು ಸದೃಶ ನಿಲುವನ್ನು ನೋಡಲೆಂದು ಕತ್ತೆತ್ತಿದಾಗ ನಮ್ಮ ಎತ್ತರವೂ ಕೊಂಚವಾದರೂ ಏರುವುದು ನಿಜವೇ ಸರಿ. ಒಂದು ಹೆಮ್ಮರದ ಕೆಳಗೆ ನಿಂತಾಗ ಅದರ ನೆರಳು ನಮ್ಮ ಮೇಲೆ ಬೀಳುವಂತೆ ಮಂಕುತಿಮ್ಮನ ಕಗ್ಗದಿಂದ ಪ್ರಭಾವಿತನಾದ ನಾನು ನನ್ನ ಮೊದಲ ಚತುಷ್ಪದಿಯನ್ನು ರಚಿಸಿದ್ದು ೧೮-೧೨-೨೦೦೭ ರಲ್ಲಿ, ಅದು ಇಲ್ಲಿದೆ...

ಸುಖ ಸುಪ್ಪತ್ತಿನೊಳಾಡುವರಂ ಕಂಡು
ಕರುಬುವ ಮಂದಿ ಕಷ್ಟಕೋಟಲೆ
ರಹಿತ ಸಗ್ಗ ಘೋರವೆಂದುಲಿವರು
ಪಾಪವದಲ್ಲ ಪುಣ್ಯವೋ - ಪೆದ್ದುಗುಂಡ