ಶುಕ್ರವಾರ, ಜನವರಿ 9, 2009

ಪೆದ್ದುಗುಂಡನ ರಗಳೆ - ೧೮

ಪಗಡೆ ರಂಗದಿ ಎಲ್ಲವನು ಸೋತ
ರಣ ರಂಗದಿ ಗೆದ್ದ, ಎಲ್ಲವನು.
ಅಲ್ಲಿ ಮಾನ, ಇಲ್ಲಿ ಜೀವವೇ ಪಣ !
ಎರಡೂ ಜೂಜಿನಾಟ- ಪೆದ್ದುಗುಂಡ

ಪೆದ್ದುಗುಂಡನ ರಗಳೆ - ೧೭

ಸಂಸಾರ ಹಾಸಂಗಿ, ನೀ ಒಂದು ಕಾಯಿ
ವಿಧಿ ಬಿಟ್ಟ ದಾಳದಂತೆ ನಿನ್ನ ನಡೆ
ಹಾವ್ದೋರೆ ಹಿನ್ನಡೆ; ಏರು, ಏಣಿ ಬರಲು
ಜೀವನ ಪರಮಪದದಾಟ - ಪೆದ್ದುಗುಂಡ
-----------------------------------
ಹಾಸಂಗಿ = ಆಟದ ಹಾಸು
ಹಾವ್ದೋರೆ = ಹಾವು + ತೋರೆ = ಹಾವು ಎದುರಾದರೆ
ಪರಮಪದದಾಟ = ಪರಮಪದದ + ಆಟ = ಹಾವು ಏಣಿ ಆಟ

ಬುಧವಾರ, ಜನವರಿ 7, 2009

ಪೆದ್ದುಗುಂಡನ ರಗಳೆ - ೧೬

ಶಬ್ದದ ಹಂದರಕೆ ಭಾವನೆಯೆ ಹೊದಿಕೆ
ಆಲಿಪನ ಕಿವಿಯಲ್ಲಿ ಮತ್ತದು ನಗ್ನ!
ಅದಕಲ್ಲಿ ಹೊಸ ಭಾವ ತೊಡಿಸೆ
ಕೇಳುಗನ ಕಿವಿಯಂತೆ ಅರ್ಥ - ಪೆದ್ದುಗುಂಡ

ಮಂಗಳವಾರ, ಜನವರಿ 6, 2009

ಪೆದ್ದುಗುಂಡನ ರಗಳೆ - ೧೫

ಹೃದಯ ತಂತಿ ಮೀಟುವ ಗಂಧರ್ವ ಗೀತ
ಕಣಕಣದಿ ಆನಂದ ತುಡಿತ
ಮನದಾಳದ ನೂರು ಭಾವನೆಗಳ ಚಿಲುಮೆ
ಸಂಗೀತ ನಿಜ ಸ್ವರ್ಗ - ಪೆದ್ದುಗುಂಡ