ಮಂಗಳವಾರ, ಡಿಸೆಂಬರ್ 30, 2008

ಪೆದ್ದುಗುಂಡನ ರಗಳೆ - ೧೪

ದಿನದ ಆಟೋಟದಿ ಮನ ಜಡವಾಯ್ತು
ಜೀವನಾನಂದ ಬುಗ್ಗೆ ಒಣಗಿ ಬರಿದಾಯ್ತು
ಹಳೆ ನೆನಪ ಹೊಸ ಮೆಲುಕು ಕಣ್ಣೀರ ತರಿಸೆ
ಬರಡು ಮನ ಹಸಿರಾಯ್ತು ! - ಪೆದ್ದುಗುಂಡ

ಬುಧವಾರ, ಡಿಸೆಂಬರ್ 24, 2008

ಪೆದ್ದುಗುಂಡನ ರಗಳೆ - ೧೩

ಜ್ಞಾನ ಬೀಜಕೆ ಇಚ್ಛೆಯ ನೀರೆರೆಯೆ
ಚಿತ್ತ ಭಿತ್ತಿಯಲಿ ಅರಿವು ಕುಡಿಯೊಡೆವುದು.
ಬೆಳೆದಂತೆ ಪಸರಿಸಿ ಬಿಳಲುಗಳ ಬಿಟ್ಟ
ಜ್ಞಾನ ವಿಶ್ವವಟ - ಪೆದ್ದುಗುಂಡ
-------------------------------
ಬಿಳಲು = ಬಿಳಲು ಬೇರು
ವಿಶ್ವವಟ = ವಿಶ್ವದಗಲ ಹಬ್ಬಿರುವ ವಟವೃಕ್ಷ

ಭಾನುವಾರ, ಡಿಸೆಂಬರ್ 14, 2008

ಪೆದ್ದುಗುಂಡನ ರಗಳೆ - ೧೨

ಮೂಲಿಕೆ ಸಿಗದೆ ಪವನಸುತಗೆ ಪೇಚು
ಸಂಜೀವಿನಿ ಪರ್ವತವೆ ಸಮಸ್ಯೆಯಾಗೆ
ವಿರಾಟನಾಗಿ ಬೆಳೆದ, ಬೆಟ್ಟವನೆ ಕಿತ್ತೊಯ್ದ
ಸಮಸ್ಯೆಗಿಂತೆತ್ತರನಾಗು - ಪೆದ್ದುಗುಂಡ
--------------------------------------
ಪವನಸುತ = ವಾಯು ಪುತ್ರ (ಹನುಮಂತ)

ಪೆದ್ದುಗುಂಡನ ರಗಳೆ - ೧೧

ಸಮುದ್ರವೆದುರಾಗೆ ಹನುಮ ನಿಂತನೆ?
ಬೆಟ್ಟ ಹೊರುವಾಗೆ ಅವ ಹಿಂಜರಿದನೆ?
ಎಲ್ಲ ಹಾದಿಗಳಲುಂಟು ಕೋಟಲೆಗಳು;
ಅಡೆತಡೆಗೆ ಮಣಿಯದಿರು - ಪೆದ್ದುಗುಂಡ
----------------------------------
ಸಮುದ್ರವೆದುರಾಗೆ = ಸಮುದ್ರವು ಎದುರಾದಾಗ
ಅವ = ಅವನು

ಶನಿವಾರ, ಡಿಸೆಂಬರ್ 13, 2008

ಪೆದ್ದುಗುಂಡನ ರಗಳೆ - ೧೦

ಕಾಸಗಲ ಅಕ್ಷಿ ಪಟದಿ ಕೋಟಿ ದೃಶ್ಯಗಳು
ಹಿಡಿಯ ಹೃದಯದಿ ಭಾವನೆಗಳ ಕಡಲು
ಭೌತ ಪರಿಧಿಯೊಳ್ ಭಾವಾನುಭವ ಅನಂತ
ಮಿತದೊಳಪರಿಮಿತ - ಪೆದ್ದುಗುಂಡ
-----------------------------
ಕಾಸಗಲ = ಕಾಸು ನಾಣ್ಯದಷ್ಟು ಅಗಲ
ಅಕ್ಷಿ ಪಟದಿ = ಕಣ್ಣಿನ ಪಟಲದಲ್ಲಿ (ರೆಟಿನಾ)
ಹಿಡಿಯ = ಹಿಡಿಯಷ್ಟು (ಮುಷ್ಟಿಯಷ್ಟು)

ತೋರಣ

ಹಸಿರು ತಳಿರು ತೋರಣ
ಸಿಹಿ ಹೋಳಿಗೆ ಹೂರಣ
ದಿನವು ಬರಲಿ
ಮಜದ ಹಬ್ಬ
ಶಾಲೆರಜೆಗೆ ಕಾರಣ

ಬುಧವಾರ, ಡಿಸೆಂಬರ್ 10, 2008

ಪುಟ್ಟ ಹೆಜ್ಜೆ

ಪುಟ್ಟ ಪುಟ್ಟ ಹೆಜ್ಜೆ
ತುಂಟ ಕಾಲ್ಗೆ ಗೆಜ್ಜೆ
ಗಲ್ಲ ಸವರಿ
ಮುತ್ತ ನೀಡೆ
ಮುಖದಿ ಕೆಂಪು ಲಜ್ಜೆ.

ಗುರುವಾರ, ಡಿಸೆಂಬರ್ 4, 2008

ಪೆದ್ದುಗುಂಡನ ರಗಳೆ - ೯

ನೆನಪ ಸಂದೂಕಿಗೆ ಬಹುಗಂಧ ಚಾವಿ
ಎಲ್ಲಿಂದಲೋ ತೇಲಿ ಬಂದ ವಾಸನೆಯ ಅಮಲು
ವರ್ಷಾಂತರದ ಮರೆವಿನಲೂ ನೋವಿನ ಕದತೆರೆಯೆ
ಮತ್ತೆ ಕಾಡಿತು ನೆನಪು - ಪೆದ್ದುಗುಂಡ
-------------------------------------------------
ಸಂದೂಕು = ಪೆಟ್ಟಿಗೆ
ಬಹುಗಂಧ = ವಿವಿಧ ವಾಸನೆಗಳು
ಚಾವಿ = ಬೀಗದ ಕೈ

ಪೆದ್ದುಗುಂಡನ ರಗಳೆ - ೮

ಸಂಕಲ್ಪದಿಂ ಜೀವದ ಚಲನ ವಿಕಸಂಗಳು
ಶಯನ, ಪೋಷಣ, ಮಿಥುನ, ಭ್ರಮಣಂಗಳು
ಇಚ್ಛೆ ಪೂರ್ತಿಯಿಂ ತೃಪ್ತಿ, ಅದುವೇ ಮರಣ
ಜೀವಸೆಲೆ ಅತೃಪ್ತ - ಪೆದ್ದುಗುಂಡ

ಬುಧವಾರ, ಡಿಸೆಂಬರ್ 3, 2008

ಪೆದ್ದುಗುಂಡನ ರಗಳೆ - ೭

ಅಸ್ಪಂದಿತ ಸ್ನೇಹಾನುರಾಗಗಳು
ಹೃದಿಂದುವಿನ ಕೇತು ರಾಹುಗಳು.
ಎದೆಯಿಂ ವಿಷ ಬೀಜ ಕಿತ್ತೊಗೆಯದಿರೆ,
ಮನಬನವು ಬರಡು - ಪೆದ್ದುಗುಂಡ

------------------------------------

ಅಸ್ಪಂದಿತ = ಪ್ರತಿಕ್ರಿಯೆ ದೊರಕದ
ಹೃದಿಂದು = ಹೃತ್ + ಇಂದು = ಎದೆಯ ಚಂದಿರ