ಶುಕ್ರವಾರ, ನವೆಂಬರ್ 28, 2008

ಪೆದ್ದುಗುಂಡನ ರಗಳೆ - ೬

ಪಾದಸ್ಪರ್ಶದಿ ಶಿಲೆ ಸಾಧ್ವಿಯಾದಲ್
ನಾಮಬಲದಿ ಶಿಲೆ ಜಲದಿ ತೇಲಲ್
ಅರ್ಧಾಂಗಿಯಿಂ ಅಗ್ನಿ ಪ್ರಮಾಣ ಬಯಸೆ
ಮನಸೇಕೆ ಕಲ್ಲಾಯ್ತು? - ಪೆದ್ದುಗುಂಡ

ಭಾನುವಾರ, ನವೆಂಬರ್ 9, 2008

ಪೆದ್ದುಗುಂಡನ ರಗಳೆ - ೫

ಜಗದ ಸತ್ಯ, ಜ್ಞಾನ, ಕಾಡ ಮೂಲೆಯ ಪೂ
ಋಷಿಪುಂಗವರು ಅದ ಹೀರುವ ದುಂಬಿ.
ಸಾಸಿರ ಪೂರಸದೀಪಾಕ ಸನಾತನ;
ಈ ಧಮ್ಮ ಸವಿದುಪ್ಪ - ಪೆದ್ದುಗುಂಡ.


---------------------------------

ಸಾಸಿರ = ಸಾವಿರ = ಲೆಕ್ಖವಿಲ್ಲದಷ್ಟು

ಪೂರಸದೀಪಾಕ = ಪೂ + ರಸದ + ಈ + ಪಾಕ

ಧಮ್ಮ = ಧರ್ಮ (ಸನಾತನ ಧರ್ಮ )

ಸವಿದುಪ್ಪ = ಸಿಹಿ ತುಪ್ಪ = ಜೇನು ತುಪ್ಪ

ಶುಕ್ರವಾರ, ನವೆಂಬರ್ 7, 2008

ಪೆದ್ದುಗುಂಡನ ರಗಳೆ - ೪

ಹೂಂಕರಿಸಿ ಘೀಳಿಟ್ಟು ತಮಸ ಹೊರಗಟ್ಟು
ಹಣತೆ ಹೊನ್ನ ಬೆಳಗಿಸಿ ಸತ್ತ್ವ ಬರಮಾಡು
ದೀಪದ ಬೆಳಕಲ್ಲಿ ಮಿಂದ ಮನೆಯೊಳಗೆ
ಸಿರಿದೇವಿ ಬರುವಳು - ಪೆದ್ದುಗುಂಡ

ಪೆದ್ದುಗುಂಡನ ರಗಳೆ - ೩

ನಭದ ಆಳೆತ್ತರ ಉದ್ದಗಲಗಳುಂಟೆ
ಅರಿವಿನ ಹರವು ಅದಕೆ ದುಪ್ಪಟ್ಟು
ಕಲಿಕೆ ಪಥ ಅಂತ್ಯವಿಲ್ಲದ ಪಯಣ
ಜ್ಞಾನದಾಹ ಚಿರಕಾಲ - ಪೆದ್ದುಗುಂಡ

ಗುರುವಾರ, ನವೆಂಬರ್ 6, 2008

ಪೆದ್ದುಗುಂಡನ ರಗಳೆ - ೨

ಒಂದೊಮ್ಮೆ ಎಲ್ಲೆಡೆ ಬೆಳಕ ಕುಡಿಮಿಂಚು
ತಾಮಸದ ಕರಿ ನೆರಳ ಸರಿಯಿತು ಸಂಚು
ಕತ್ತಲೆಯ ಸುಖಭೂತ ನರಳಿ ಬಸವಳಿಯೆ
ದೀಪ ಜ್ಯೋತಿ ಅರಳಿತು - ಪೆದ್ದುಗುಂಡ

ಬುಧವಾರ, ನವೆಂಬರ್ 5, 2008

ಅಂದೊಮ್ಮೆ

ಅಂದೊಮ್ಮೆ ನಾನಿನ್ನ ನೋಡಿದಾಗ
ನಿನ್ನ ಬಳಸಿ ಬರಸೆಳೆದಾಗ
ತನು ಕಂಪ ಸವಿದಾಗ
ನಿನ್ನ ಸಿಹಿ ಅಧರ ಮೆದ್ದಾಗ
ಮನ ಹುಚ್ಚಾಯಿತಾಗ

ಇಂದೊಮ್ಮೆ ನಿನ್ನೆನಹು ಕಾಡಿದಾಗ
ನಿನ್ನ ತುಟಿ ಜೇನ ನೆನೆದಾಗ
ಕನಸಾಗಿ ಮನಸ ಹೊಯ್ದಾಗ
ಬರಿದಾದ ಎದೆ ನೋಯಿತೀಗ
ನೀರಾಗಿ ಕಣ್ಣು ಹರಿಯಿತೀಗ